ಬೇಲೂರು ಕೇಶವದಾಸ
1885-1948. ಪ್ರಸಿದ್ಧ ಕೀರ್ತನಕಾರರು. ಹರಿದಾಸ ಸಾಹಿತ್ಯದ ಪುರೋಭಿವೃದ್ಧಿಗಾಗಿ ಶ್ರಮಿಸಿದ ಮಹನೀಯರು.
	ವೆಂಕಟಸುಬ್ಬದಾಸ ಮತ್ತು ಭೀಮಾಬಾಯಿ ದಂಪತಿಗಳಿಗೆ 1885ರಲ್ಲಿ ಹಿರಿಯ ಮಗನಾಗಿ ಹುಟ್ಟಿದರು. ಹಾಸನ ತುಮಕೂರು ಮುಂತಾದೆಡೆಗಳಲ್ಲಿ ವಿದ್ಯಾಭ್ಯಾಸ ಸಾಗಿತು. ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದರು. ಸಂಸ್ಕøತವನ್ನು ಆಳವಾಗಿ ಅಭ್ಯಾಸಮಾಡಿದ್ದ ಕೇಶವದಾಸರು ತಮ್ಮ ತಂದೆಯವರ ಮಾರ್ಗದರ್ಶನದಲ್ಲಿ ಕೀರ್ತನಕ್ಷೇತ್ರ ಪ್ರವೇಶಿಸಿ ಉತ್ತಮ ಕೀರ್ತನಕಾರರೆಂದು ಹೆಸರು ಗಳಿಸಿದರು.

	ಒಮ್ಮೆ ಧಾರವಾಡದಲ್ಲಿ ಕೀರ್ತನೆ ಮಾಡುತ್ತಿದ್ದಾಗ ಕರ್ನಾಟಕದ ಧುರೀಣ ಮುದವೀಡು ಕೃಷ್ಣ ರಾಯರ ಪರಿಚಯವಾಯಿತು. ಅವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಆಂದೋಲನದಲ್ಲಿ ಧುಮುಕಿದರು. ಅನಂತರ ಇವರ ಹೆಚ್ಚಿನ ಕೀರ್ತನೆಗಳಿಗೆ ರಾಷ್ಟ್ರ ಸ್ವಾತಂತ್ರ್ಯವೇ ವಸ್ತುವಾಗಿ ಪರಿಣಮಿಸಿತು. ಕೇಶವದಾಸರಿಗೆ ಗಾಂಧೀಜಿಯವರೊಡನೆ ನಿಕಟ ಸಂಪರ್ಕವಿತ್ತು. ದಾಸರ ಕೀರ್ತನ ಕಲೆಯನ್ನು ಗಾಂಧೀಜಿ ಬಹುವಾಗಿ ಮೆಚ್ಚಿಕೊಂಡರು. ಕನ್ನಡ ಪದಗಳ ಸೌಂದರ್ಯವನ್ನು ದಾಸರ ಮುಖದಿಂದ ಸವಿದ ಅವರು ಈ ವಿಷಯವನ್ನು ತಮ್ಮ ಆತ್ಮಕಥನ ಸತ್ಯಶೋಧನದಲ್ಲೂ ಉಲ್ಲೇಖಿಸಿದ್ದಾರೆ.

	ದಾಸರು ಕನ್ನಡದಲ್ಲಿ ಗ್ರಂಥರಚನೆ ಮಾಡಿದ್ದಾರೆ. ಜೀವನದಲ್ಲಿ ಅಪಾರನೊಂದು ಬೆಂದು ಐಹಿಕ್ಯ ಜೀವನದಲ್ಲಿ ಆಸಕ್ತಿಯೇ ಹೋಗಿ, ದೇಶಾಂತರ ಹೋಗಲಿ ನಿಶ್ಚಯಿಸಿದ್ದಾಗ, ಅಂಥ ಸಮಯದಲ್ಲಿ ಸುಭೋಧ ರಾಮರಾಯರ ಒಡನಾಟ ಒದಗಿ ಬಂದು ಅವರ ಪ್ರೇರಣೆಯ ಮೇರೆಗೆ ದಾಸರು ಗ್ರಂಥರಚನೆಯಲ್ಲಿ ತೊಡಗಿದರೆಂದು ತಿಳಿದು ಬರುತ್ತದೆ. ಕರ್ನಾಟಕ ಭಕ್ತವಿಜಯ (1932 ಎರಡು ಭಾಗಗಳಲ್ಲಿ), ಹರಿದಾಸ ಸಾಹಿತ್ಯ ವಿಮರ್ಶೆ ಕನ್ಯಕಾಪುರಾಣ ಮತ್ತು ರಾಘವೇಂದ್ರ ವಿಜಯ ವಿಸ್ತಾರ-ಇವು ಇವರ ಗ್ರಂಥಗಳು. ಕರ್ನಾಟಕ ಭಕ್ತವಿಜಯ ಅಖಂಡ ಕರ್ನಾಟಕದ ಹರಿದಾಸರ ಪ್ರೌಢಿಮೆ-ಸಾಧನೆಯನ್ನೊಳಗೊಂಡ ಉದ್ಗ್ರಂಥ ಈ ಗ್ರಂಥರಚನೆಗಾಗಿ ದಾಸರು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಹರಿದಾಸರ ಮತ್ತು ಅವರ ಕೃತಿಗಳ ಬಗ್ಗೆ ವಿಷಯ ಸಂಗ್ರಹ ಮಾಡಿದ್ದರು. ಈ ಗ್ರಂಥ ದಾಸಸಾಹಿತ್ಯವನ್ನು ತಿಳಿಯಬೇಕೆನ್ನುವವರಿಗೆ ಒಂದು ಉತ್ತಮ ಕೈಪಿಡಿಯಂತಿದೆ. ಸುಮಾರು 40 ವರ್ಷಗಳ ಕಾಲ ಕೀರ್ತನ ಕ್ಷೇತ್ರದಲ್ಲಿ, ಸಾಹಿತ್ಯ ರಂಗದಲ್ಲಿ ಸೇವೆ ಸಲ್ಲಿಸಿದ ದಾಸರು 1948ರಲ್ಲಿ ನಿಧನಹೊಂದಿದರು.				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ